For the best experience use Mini app app on your smartphone
ಬಾಗಲಕೋಟೆಯ ನವನಗರ ಠಾಣೆ ಸಿಪಿಐ ತಮ್ಮೊಂದಿಗೆ ಗೌರವದಿಂದ ನಡೆದುಕೊಳ್ಳಲಿಲ್ಲ ಎಂದು ಅವರ ವಿರುದ್ಧ ಬುಧವಾರ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಜಾಗರಣ ವೇದಿಕೆ ಸದಸ್ಯರ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ ನಡೆದಿದೆ. ಘಟನೆಯಿಂದ ಕೋಪಗೊಂಡು ಪೊಲೀಸರ ಜತೆ ವಾಗ್ವಾದಕ್ಕಿಳಿದ ಸದಸ್ಯರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಲಾಗಿದೆ. “ಘಟನೆ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು” ಎಂದು ಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.
short by Prashant badiger / 10:43 pm on 08 May
ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್, ನಗರಸಭೆ ಪೌರಾಯುಕ್ತ ಕಾಂತರಾಜ ಹಾಗೂ ಸದಸ್ಯ ಖಾದರ ಆನವಟ್ಟಿ ಅವರ ಮೇಲೆ ಜೇನುನೊಣಗಳು ದಾಳಿ ನಡೆಸಿವೆ. ತಾಲ್ಲೂಕಿನ ಕೆಂಗ್ರೆಹೊಳೆ ಬಳಿ ಬುಧವಾರ ನೀರಿನ ಮಟ್ಟ ಪರಿಶೀಲನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಶಿರಸಿಯ ಟಿಎಸ್ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
short by Prashant badiger / 03:36 pm on 08 May
ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ಬುಧವಾರ ನಡೆದ ಗ್ಯಾಂಗ್‌ವಾರ್‌ನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ರೌಡಿ ಶೀಟರ್‌ಗಳಾದ ಶೋಯೆಬ್ ಮತ್ತು ಮಹಮ್ಮದ್ ಗೌಸ್‌ನನ್ನು ಹತ್ಯೆ ಮಾಡಲಾಗಿದೆ. ರೌಡಿಶೀಟರ್ ಯಾಸೀನ್ ಖುರೇಷಿ ಮೇಲೆ ಹಲ್ಲೆ ಮಾಡಲು ಬಂದಿದ್ದ ಈ ಇಬ್ಬರನ್ನು ಯಾಸೀನ್ ಕಡೆಯವರು ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ವರದಿ ಹೇಳಿದೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
short by Prashant badiger / 08:22 pm on 08 May
2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ಮೇ 9ರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್ 25ರಿಂದ ಏಪ್ರಿಲ್ 6ರವರೆಗೆ ನಡೆದಿದ್ದ ನಡೆದಿದ್ದ ಪರೀಕ್ಷೆಯಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಗುರುವಾರ ಬೆಳಗ್ಗೆ 10.30ರ ಬಳಿಕ karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.
short by Koushik KS / 02:25 pm on 08 May
ಮುಂಬೈ ಇಂಡಿಯನ್ಸ್ (MI) ಐಪಿಎಲ್ 2024ರ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಬುಧವಾರ (SRH) ಲಕ್ನೋ ಸೂಪರ್ ಜೈಂಟ್ಸ್ (LSG) ಅನ್ನು ಸನ್‌ರೈಸರ್ಸ್ ಹೈದರಾಬಾದ್ 10 ವಿಕೆಟ್‌ಗಳಿಂದ ಸೋಲಿಸಿದ ನಂತರ ಇದು ನಡೆದಿದೆ. ಐದು ಬಾರಿಯ ಚಾಂಪಿಯನ್ ಆಗಿದ್ದ MI ಐಪಿಎಲ್ 2024ರಲ್ಲಿ ಗರಿಷ್ಠ 12 ಅಂಕಗಳನ್ನು ಗಳಿಸಬಹುದಾಗಿದ್ದು, ಆದಾಗ್ಯೂ, ಅವರು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವುದು ಅಸಾಧ್ಯವಾಗಿದೆ.
short by Prashant badiger / 10:32 pm on 08 May
ಪೆನ್​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಸೇರಿದಂತೆ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಹಾಸನದ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಅಶ್ಲೀಲ ವಿಡಿಯೋ ಇರುವ ಪೆನ್​ಡ್ರೈವ್ ಬಿಡುಗಡೆ ಮಾಡಿದ ಆರೋಪದಡಿ ಜೆಡಿಎಸ್ ನೀಡಿದ ದೂರಿನ ಅನ್ವಯ ಸೈಬರ್ ಕ್ರೈಂ​​ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್, ಪುಟ್ಟರಾಜ್​​, ನವೀನ್,​​ ಚೇತನ್ ವಿರುದ್ಧ ಎಫ್​ಐಆರ್ ದಾಖಲಾಗಿತ್ತು.
short by Koushik KS / 04:32 pm on 08 May
'ಪೂರ್ವ ಭಾರತದ ಜನರು ಚೀನೀಯರಂತೆ ಕಾಣುತ್ತಾರೆ, ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ' ಎಂಬ ತಮ್ಮ ಹೇಳಿಕೆ ಕುರಿತು ಟೀಕೆಗಳ ಮಧ್ಯೆ ಸ್ಯಾಮ್ ಪಿತ್ರೋಡಾ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಪಿತ್ರೋಡಾ ಅವರು ಸ್ವಯಂ ಪ್ರೇರಿತವಾಗಿ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, "ಕಾಂಗ್ರೆಸ್ ಅಧ್ಯಕ್ಷರು ಅವರ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ" ಎಂದು ಹೇಳಿದರು.
short by Prashant badiger / 07:55 pm on 08 May
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕರ್ನಾಟಕದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಸಂಬಂಧವಿದೆ ಎಂಬ ಮಾಧ್ಯಮಗಳ ಸುಳ್ಳು ವರದಿಗಳನ್ನು ತಡೆಯಲು ಬೆಂಗಳೂರು ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. "ಮಾಧ್ಯಮಗಳು [ಗೌಡ ಮತ್ತು ಕುಮಾರಸ್ವಾಮಿ] ಅವರ ಮಾರ್ಫ್ಡ್ ಮುಖಗಳನ್ನು ಲೇಖನಗಳಲ್ಲಿ ಅಥವಾ ಸುದ್ದಿ ವಾಹಿನಿಗಳಲ್ಲಿ ತೋರಿಸುವುದು ಸರಿಯಲ್ಲ" ಎಂದು ನ್ಯಾಯಾಲಯ ಹೇಳಿದೆ.
short by Prashant badiger / 08:05 pm on 08 May
ಯಾದಗಿರಿ ತಾಲ್ಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಕಲ್ಲು ತೂರಾಟ ಘಟನೆಯನ್ನು ಹೊರತುಪಡಿಸಿದರೆ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ.67ರಷ್ಟು ಮತದಾನವಾಗಿದೆ. ಬಿಜೆಪಿಯಿಂದ ಮಾಜಿ ಸಚಿವ ರಾಜಾ ನರಸಿಂಹ ನಾಯಕ್ (ರಾಜುಗೌಡ), ಕಾಂಗ್ರೆಸ್‌ನಿಂದ ರಾಜಾ ವೇಣುಗೋಪಾಲ್ ನಾಯಕ್ ಸೇರಿದಂತೆ ಆರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ವರ್ಷದ ಜನವರಿಯಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ನಿಧನರಾದ ಹಿನ್ನೆಲೆ ಈ ಸ್ಥಾನ ತೆರವಾಗಿತ್ತು.
short by Koushik KS / 12:28 pm on 08 May
ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಸಂದರ್ಶನವೊಂದರಲ್ಲಿ ಭಾರತದಲ್ಲಿ, "ಪೂರ್ವದ ಜನರು ಚೀನಿಯರಂತೆ ಮತ್ತು ಪಶ್ಚಿಮದ ಜನರು ಅರಬ್ಬರಂತೆ ಕಾಣುತ್ತಾರೆ, ಉತ್ತರದ ಜನರು ಬಿಳಿಯರಂತೆ ಮತ್ತು ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ" ಎಂದು ಹೇಳಿದರು. ಹಲವು ಬಿಜೆಪಿ ನಾಯಕರು ಪಿತ್ರೋಡಾ ಹೇಳಿಕೆಯನ್ನು ಟೀಕಿಸಿದ್ದಾರೆ. "ನಾನು ಈಶಾನ್ಯ ಮೂಲದವನು ಮತ್ತು ಭಾರತೀಯನಂತೆ ಕಾಣುತ್ತೇನೆ" ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
short by Koushik KS / 02:33 pm on 08 May
ಮೂವರು ಪಕ್ಷೇತರ ಶಾಸಕರಾದ ಧರಂಪಾಲ್ ಗೊಂಡರ್, ರಣಧೀರ್ ಗೋಲನ್ ಮತ್ತು ಸೋಂಬಿರ್ ಸಾಂಗ್ವಾನ್ ಅವರು 30 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ ಪರವಾಗಿ ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರದಿಂದ ತಮ್ಮ ಬೆಂಬಲ ಹಿಂಪಡೆದರು. ಬಿಜೆಪಿ ಸಂಖ್ಯೆ 43ಕ್ಕೆ ಇಳಿದಿದ್ದು, ಇದು ರಾಜ್ಯ ವಿಧಾನಸಭೆಯಲ್ಲಿ ಬಹುಮತಕ್ಕಿಂತ ಎರಡು ಕಡಿಮೆಯಾಗಿದೆ. 10 ಶಾಸಕರನ್ನು ಹೊಂದಿರುವ ಜೆಜೆಪಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದು, ರಾಜ್ಯ ಸರ್ಕಾರ ಪತನಗೊಳ್ಳುವ ಸಾಧ್ಯತೆಯನ್ನು ಸೂಚಿಸಿದೆ.
short by Koushik KS / 01:55 pm on 08 May
ಸಂಸದ ಪ್ರಜ್ವಲ್ ರೇವಣ್ಣರ ಪೆನ್​​ಡ್ರೈವ್ ಪ್ರಕರಣ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​.ಡಿ ಕುಮಾರಸ್ವಾಮಿ, “ಪ್ರಜ್ವಲ್​ ಮಾಜಿ ಕಾರು ಚಾಲಕ ಕಾರ್ತಿಕ್ ಬೆಂಗಳೂರಿನಲ್ಲೇ ಇದ್ದಾನೆ. ಆತನನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಕ್ಷಣೆ ಮಾಡುತ್ತಿದ್ದಾರೆ” ಎಂದಿದ್ದಾರೆ. “ನಿಮ್ಮ ತನಿಖೆ ರೇವಣ್ಣ ಹಾಗೂ ಪ್ರಜ್ವಲ್ ಮೇಲೆ ಮಾತ್ರ ಯಾಕೆ ಟಾರ್ಗೆಟ್ ಆಗಿದೆ. ವಿಡಿಯೋ ರಿಲೀಸ್ ಮಾಡಿದವರ ಮೇಲೆ ಯಾಕೆ ತನಿಖೆ ಮಾಡುತ್ತಿಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.
short by Koushik KS / 04:24 pm on 08 May
ಕರ್ನಾಟಕದ ಎಲ್ಲಾ 28 ಲೋಕಸಭಾ ಸ್ಥಾನಗಳಿಗೆ ಮಂಗಳವಾರ ಮತದಾನ ಮುಕ್ತಾಯವಾಗಿದ್ದು, ಈ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.69.9ರಷ್ಟು ಮತದಾನ ದಾಖಲಾಗಿದೆ. ಎರಡನೇ ಹಂತದ ಮತದಾನದಲ್ಲಿ 14 ಸ್ಥಾನಗಳಿಗೆ ಶೇ.70.4ರಷ್ಟು ಮತದಾನ ನಡೆದಿದ್ದರೆ, ಏಪ್ರಿಲ್ 26ರಂದು ನಡೆದ 14 ಸ್ಥಾನಗಳಲ್ಲಿ ಶೇ.69.5ರಷ್ಟು ಮತದಾನವಾಗಿದೆ. ಜೂನ್ ನಾಲ್ಕರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
short by Koushik KS / 04:21 pm on 08 May
ಮಹಿಳೆ ಅಪಹರಣ ಪ್ರಕರಣದ ಆರೋಪಿ ಶಾಸಕ ಹೆಚ್.ಡಿ.ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಅಪಹರಿಸಿದ್ದಾರೆ ಎಂದು ಆಕೆಯ ಪುತ್ರ ನೀಡಿದ ದೂರಿನ್ವಯ ರೇವಣ್ಣ ವಿರುದ್ಧ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ SIT ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದರು.
short by Prashant badiger / 04:31 pm on 08 May
ಕಾಂಗ್ರೆಸ್‌ನ ಸ್ಯಾಮ್ ಪಿತ್ರೋಡಾ ಅವರ 'ಪೂರ್ವ ಭಾರತದ ಜನರು ಚೀನಿಯರಂತೆ ಕಾಣುತ್ತಾರೆ, ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ' ಎಂಬ ಹೇಳಿಕೆಯ ನಂತರ, ಅಧ್ಯಕ್ಷೀಯ ಚುನಾವಣೆಯಲ್ಲಿ ದ್ರೌಪದಿ ಮುರ್ಮುರನ್ನು ಸೋಲಿಸಲು ಕಾಂಗ್ರೆಸ್ ಏಕೆ ಪ್ರಯತ್ನಿಸಿತು ಎಂದು ಈಗ ನನಗೆ ತಿಳಿಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. "ಅಧ್ಯಕ್ಷೆ ಮುರ್ಮು ಮೈಬಣ್ಣದಿಂದಾಗಿ ಅವರು ಆಫ್ರಿಕನ್ ಎಂದು ಕಾಂಗ್ರೆಸ್ ನಂಬಿತ್ತು. ಹೀಗಾಗಿ ಅವರನ್ನು ಸೋಲಿಸಲು ಬಯಸಿತ್ತು" ಎಂದು ಅವರು ಹೇಳಿದರು.
short by Prashant badiger / 05:29 pm on 08 May
ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಎಸ್‌ಐಟಿ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಲು ಸುಪ್ರೀಂ ಕೋರ್ಟ್ ವಕೀಲರಾದ ಜೈನಾ ಕೊಠಾರಿ ಮತ್ತು ಅಶೋಕ್ ನಾಯಕ್ ಅವರನ್ನು ಹೆಚ್ಚುವರಿ ಅಭಿಯೋಜಕರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ಅಭಿಯೋಜನಕರ ತಂಡವನ್ನು ಬಲಪಡಿಸುವ ಉದ್ದೇಶದಿಂದ ಈ ಇಬ್ಬರನ್ನು ನೇಮಿಸಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
short by Prashant badiger / 06:10 pm on 08 May
ಗೌಪ್ಯ ಮತದಾನಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕಾಗಿ ದಾವಣಗೆರೆ ಬಿಜೆಪಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಮತದಾನ ಮಾಡುವ ವೇಳೆ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಬ್ಯಾಲೆಟ್ ಮಷಿನ್‌ ಅನ್ನು ಇಣುಕಿ ನೋಡಿದ್ದಾರೆ. ಈ ದೃಶ್ಯಾವಳಿಯು ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
short by Koushik KS / 11:56 am on 08 May
ಕಾಂಗ್ರೆಸ್‌ನ ಸ್ಯಾಮ್ ಪಿತ್ರೋಡಾ ಅವರ 'ಪೂರ್ವ ಭಾರತದ ಜನರು ಚೀನಿಯರಂತೆ ಕಾಣುತ್ತಾರೆ, ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ' ಎಂಬ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಪ್ರತಿಕ್ರಿಯಿಸಿದ್ದು, "ನಾನು ಇಂದು ತುಂಬಾ ಕೋಪಗೊಂಡಿದ್ದೇನೆ" ಎಂದು ಹೇಳಿದರು. "ಸಂವಿಧಾನವನ್ನು ತಲೆಯ ಮೇಲೆ ಇಟ್ಟುಕೊಂಡು ನೃತ್ಯ ಮಾಡುವ ಜನರು ತಮ್ಮ ಚರ್ಮದ ಬಣ್ಣದ ಆಧಾರದ ಮೇಲೆ ನನ್ನ ದೇಶವಾಸಿಗಳನ್ನು ಅವಮಾನಿಸುತ್ತಿದ್ದಾರೆ" ಎಂದ ಪ್ರಧಾನಿ ಮೋದಿ, ಅದನ್ನು ನಾನು ಸಹಿಸುವುದಿಲ್ಲ ಎಂದರು.
short by Koushik KS / 03:14 pm on 08 May
ಲಖಿಂಪುರ ಖೇರಿಯಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಎ ವಿರುದ್ಧವಾಗಿದ್ದಾರೆ ಎಂದರು. "ರಾಹುಲ್ ಅವರ ಅಜ್ಜಿ ಭೂಮಿಗೆ ಮರಳಿದರೂ ಸಿಎಎ ರದ್ದುಗೊಳಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು. "ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದವರಿಗೆ (ಅಲ್ಪಸಂಖ್ಯಾತರಿಗೆ) ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತವು ಪೌರತ್ವವನ್ನು ನೀಡಲಿದೆ" ಎಂದು ಅವರು ಹೇಳಿದರು.
short by Prashant badiger / 08:38 pm on 08 May
ಆಕ್ಷೇಪಾರ್ಹ ಪೋಸ್ಟ್ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ನೋಟಿಸ್ ನೀಡಿದ್ದಾರೆ. ನೋಟಿಸ್ ತಲುಪಿದ 7 ದಿನಗಳೊಳಗೆ ತನಿಖಾಧಿಕಾರಿ ಎದುರು ಹಾಜರಾಗಲು ಸೂಚಿಸಲಾಗಿದೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವೆಚ್ಚದಲ್ಲಿ ಮುಸ್ಲಿಮರನ್ನು ಕಾಂಗ್ರೆಸ್‌ ಓಲೈಸುತ್ತಿದೆ ಎಂದು ಬಿಂಬಿಸುವ ವಿಡಿಯೋವನ್ನು ರಾಜ್ಯ ಬಿಜೆಪಿ ಪೋಸ್ಟ್‌ ಮಾಡಿತ್ತು.
short by Prashant badiger / 06:43 pm on 08 May
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸಿಎಂ ಆಗಿ ಕಾರ್ಯನಿರ್ವಹಿಸಿರುವ ಹೆಚ್.ಡಿ.ಕುಮಾರಸ್ವಾಮಿಗೆ ಎಸ್ಐಟಿ ಹೇಗೆ ಕೆಲಸ ಮಾಡುತ್ತಿದೆ ಎಂಬುದು ತಿಳಿದಿದೆ ಎಂದರು. 2008ರಿಂದ 2013ರವರೆಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದು ಪ್ರಕರಣವನ್ನೂ ಸಿಬಿಐಗೆ ವಹಿಸಿರಲಿಲ್ಲ ಎಂದು ಅವರು ಹೇಳಿದರು.
short by Prashant badiger / 09:42 pm on 08 May
ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕ ಹಾಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಸಂತ್ ಬಂಗೇರ ಬುಧವಾರ ತಮ್ಮ 79ನೇ ವಯಸ್ಸಿನಲ್ಲಿ ನಿಧನರಾದರು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ 4 ಗಂಟೆ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಚುನಾವಣೆಗೆ ಸ್ಪರ್ಧಿಸಿ ವಸಂತ್ ಬಂಗೇರ ಗೆಲುವು ಸಾಧಿಸಿದ್ದರು.
short by Prashant badiger / 07:00 pm on 08 May
ಮುಸ್ಲಿಂ ಮೀಸಲಾತಿ ಸಂಬಂಧ ರಾಜ್ಯ BJP ಘಟಕ ಹಂಚಿಕೊಂಡಿದ್ದ ಆಕ್ಷೇಪಾರ್ಹ ಪೋಸ್ಟ್ ಅನ್ನು 'ಎಕ್ಸ್' ತೆಗೆದುಹಾಕಿದೆ. ಪೋಸ್ಟ್ ತೆಗೆದುಹಾಕುವಂತೆ ಚುನಾವಣಾ ಆಯೋಗ ಮಂಗಳವಾರ ಎಕ್ಸ್‌ಗೆ ಸೂಚಿಸಿತ್ತು. SC, ST ಮತ್ತು OBC ವೆಚ್ಚದಲ್ಲಿ ಮುಸ್ಲಿಮರನ್ನು ಕಾಂಗ್ರೆಸ್‌ ಓಲೈಸುತ್ತಿದೆ ಎಂದು ಬಿಂಬಿಸುವ ವಿಡಿಯೋವನ್ನು BJP ಪೋಸ್ಟ್‌ ಮಾಡಿತ್ತು. ವಿಡಿಯೋ ಮೂಲಕ BJP ಮುಸ್ಲಿಮರು ಹಾಗೂ ಪರಿಶಿಷ್ಟ ಜಾತಿ, ಪಂಗಡಗಳ ನಡುವೆ ದ್ವೇಷ, ವೈರತ್ವ ಹರಡುತ್ತಿದೆ ಎಂದು ಕಾಂಗ್ರೆಸ್ ದೂರು ನೀಡಿತ್ತು.
short by Prashant badiger / 11:25 pm on 08 May
ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ನಡುವೆ ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವ ಮೂಸಾ ಜಮೀರ್ ಬುಧವಾರ ದೆಹಲಿಗೆ ಆಗಮಿಸಿದರು. ಈ ಪ್ರವಾಸದ ವೇಳೆ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್.ಜೈಶಂಕರ್‌ರನ್ನು ಭೇಟಿ ಆಗಿ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯವು ಭಾರತೀಯರನ್ನು ತನ್ನ ಪ್ರವಾಸೋದ್ಯಮದ ಭಾಗವಾಗುವಂತೆ ವಿನಂತಿಸಿದ ಬಳಿಕ ಈ ಬೆಳವಣಿಗೆಯಾಗಿದೆ.
short by Prashant badiger / 10:58 pm on 08 May
ಮಣಿಪುರದಲ್ಲಿ ಭಾನುವಾರ ಆಲಿಕಲ್ಲು ಸಹಿತ ಭಾರಿ ಮಳೆಯಿಂದಾಗಿ ಒಬ್ಬರು ಸಾವನ್ನಪ್ಪಿದ್ದು, 15,425 ಮನೆಗಳಿಗೆ ಹಾನಿಯಾಗಿದೆ. ಸ್ಥಳಾಂತರಗೊಂಡ ಜನರಿಗೆ ವಸತಿ ಕಲ್ಪಿಸಲು ರಾಜ್ಯ ಸರ್ಕಾರವು 42 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ಪರಿಹಾರ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ ₹6.90 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಹೇಳಿದ್ದಾರೆ. ಹನ್ನೊಂದು ಗುಡ್ಡಗಾಡು ಜಿಲ್ಲೆಗಳಿಗೆ ತಲಾ ₹40 ಲಕ್ಷ ಮಂಜೂರು ಮಾಡಲಾಗಿದೆ.
short by Koushik KS / 11:30 am on 08 May
Load More
For the best experience use inshorts app on your smartphone