For the best experience use Mini app app on your smartphone
ವರದಿಗಳ ಪ್ರಕಾರ ಕರೀನಾ ಕಪೂರ್ ಅವರು ಯಶ್ ಅಭಿನಯದ ಮುಂಬರುವ ಗ್ಯಾಂಗ್‌ಸ್ಟರ್ ಸಿನಿಮಾ 'ಟಾಕ್ಸಿಕ್' ನಿಂದ ಹೊರಬಂದಿದ್ದಾರೆ. ಯಶ್ ಡೇಟ್‌ಗಳಿಗೆ ಹೊಂದಿಕೆಯಾಗದ ಕಾರಣ ಕರೀನಾ ಸಿನಿಮಾದಿಂದ ಹೊರಬಂದಿದ್ದಾರೆ ಎಂದು ವರದಿ ತಿಳಿಸಿದೆ. ಯಶ್ ಅವರ ಸಹೋದರಿಯಾಗಿ ನಟಿಸಲು ಕರೀನಾರನ್ನು ಆಯ್ಕೆ ಮಾಡಲಾಗಿತ್ತು ಎಂದು ವರದಿಯಾಗಿದೆ. ಈಗ ಈ ಪಾತ್ರಕ್ಕಾಗಿ ನಯನತಾರಾ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿ ಹೇಳಿದೆ.
short by Koushik KS / 11:48 am on 04 May
ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದಲ್ಲಿ ಬಿರುಗಾಳಿ ಮಳೆ ಸುರಿಯುವ ವೇಳೆ ಜಮೀನಿನಿಂದ ಮೇವು ತರುತ್ತಿದ್ದ 66 ವರ್ಷ ಮಾದಮ್ಮ ಎಂಬ ವೃದ್ಧೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮಾದಮ್ಮ ಎಂದಿನಂತೆ ಜಮೀನಿಗೆ ಮೇವು ತರಲು ಹೊರಟಿದ್ದು, ವಾಪಸ್ ಬರುವ ವೇಳೆ ಬಿರುಗಾಳಿ ಮಳೆ ಆರಂಭವಾಗಿದೆ. ಈ ವೇಳೆ ಏಕಾಏಕಿ ಕುಸಿದುಬಿದ್ದ ಪರಿಣಾಮ ಮಾದಮ್ಮ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.
short by Lloyd Dias / 06:36 pm on 04 May
ಈ ಹಿಂದೆ ವಯಸ್ಕರಲ್ಲಿ ಮಾತ್ರ ಕಂಡು ಬರುತ್ತಿದ್ದ ಕಾಯಿಲೆಗಳು ಈಗ ಮಕ್ಕಳಲ್ಲಿಯೂ ಕಾಣಿಸಿಕೊಳ್ಳಲು ಆಹಾರ ಪದ್ಧತಿಯಲ್ಲಿನ ಬದಲಾವಣೆಯೇ ಕಾರಣ ಎಂದು ವೈದ್ಯೆ ಅನಿಸಾ ಶೆರಾವತ್ ಹೇಳಿದರು. ಟಿ.ನರಸೀಪುರದ ಬನ್ನೂರಿನಲ್ಲಿ ಶನಿವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದು ಹೆಚ್ಚು ಸೂಕ್ತ ಎಂದು ಅವರು ಹೇಳಿದರು.
short by Lloyd Dias / 07:37 pm on 04 May
ಹೆಚ್.ಡಿ.ಕೋಟೆ ತಾಲ್ಲೂಕಿನ ಚಾಮಲಾಪುರ ಕಟ್ಟೆ ಬಳಿ ಗಂಡು ಹುಲಿಯ ಕಳೇಬರ ಪತ್ತೆಯಾಗಿದ್ದು, ಅದು ವಯೋಸಹಜವಾಗಿ ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. ಮೃತ ಹುಲಿಗೆ 11 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಎಡಗೈ ಭುಜದ ಮೂಳೆ ಮುರಿದು ಹೋಗಿದೆ ಮತ್ತು ನಾಲ್ಕು ಕೋರೆ ಹಲ್ಲುಗಳು ಸವೆದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿದೆ ಎಂದು ಪಶು ವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ತಿಳಿಸಿದ್ದಾರೆ.
short by Lloyd Dias / 08:38 pm on 04 May
ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಇಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದ ಘಟನೆ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. ಬಟ್ಟೆ ಅಂಗಡಿಯೊಂದರ ಮಹಿಳಾ ಉದ್ಯೋಗಿಯ ಇಲೆಕ್ಟ್ರಿಕ್ ಸ್ಕೂಟರ್ ಇದಾಗಿದ್ದು, ಬ್ಯಾಟರಿ ಸ್ಫೋಟಗೊಂಡು ಹೊತ್ತಿ ಉರಿದಿದೆ. ಸ್ಕೂಟರ್ ಹೊತ್ತಿ ಉರಿಯುತ್ತಿದ್ದಂತೆ ಅಕ್ಕ-ಪಕ್ಕದ ಮಳಿಗೆದಾರರು, ದೇವರಾಜ ಸಂಚಾರ ಠಾಣೆ ಪೊಲೀಸರು ನೀರು ಎರಚಿ ಬೆಂಕಿ ನಂದಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.
short by Koushik KS / 12:19 pm on 04 May
ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗಬಹುದು ಎಂದು ಜನರು ಆತಂಕಪಡುವ ಅಗತ್ಯವಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಈಗಿನ ಎಲ್ಲ ಪ್ರಕರಣಗಳು ಲಸಿಕೆಯ ಅಡ್ಡಪರಿಣಾಮಗಳಿಂದ ಆಗಿವೆ ಎಂದು ದೃಢವಾಗಿಲ್ಲ ಎಂದರು. ಕೋವಿಶೀಲ್ಡ್ ತಯಾರಕ ಸೀರಮ್ ಇನ್ಸ್‌ಟಿಟ್ಯೂಟ್ ಬಗ್ಗೆ ಸಾಕಷ್ಟು ಆರೋಪಗಳಿದ್ದು, ಎಲೊಕ್ಟೋರಲ್ ಬಾಂಡ್ ಮೂಲಕ ಅವರು ಬಿಜೆಪಿಗೆ ದೇಣಿಗೆ ನೀಡಿದ್ದಾರೆ ಎಂದು ಅವರು ಹೇಳಿದರು.
short by Lloyd Dias / 02:20 pm on 04 May
ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸವಾರ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಹುಲ್ಲಹಳ್ಳಿ ಗ್ರಾಮದಿಂದ ಕೆಂಬಾಲು ಗ್ರಾಮಕ್ಕೆ ತೆರಳುತ್ತಿದ್ದ 40 ವರ್ಷದ ರಂಗಸ್ವಾಮಿ ಮೃತ ಬೈಕ್ ಸವಾರ. ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸರು ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
short by Koushik KS / 04:32 pm on 04 May
ಸುಮಾರು 22 ವರ್ಷಗಳ ಬಳಿಕ ಮೈಸೂರು ಜಿಲ್ಲೆಯಲ್ಲಿ ತೀವ್ರ ಮಳೆಯ ಕೊರತೆ ಎದುರಾಗಿ ತರಕಾರಿ ಪೂರೈಕೆ ಕಡಿಮೆಯಾದ್ದರಿಂದ, ತರಕಾರಿಗಳ ಬೆಲೆಯೂ ಏರಿಕೆಯಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಮೈಸೂರು ಜಿಲ್ಲೆಯ ತಾಲ್ಲೂಕುಗಳು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಪ್ರತಿನಿತ್ಯ 2 ಟನ್ ತರಕಾರಿ ಮೈಸೂರಿಗೆ ಬರುತ್ತಿತ್ತು, ಆದರೆ ಈಗ 1 ಟನ್ ಮಾತ್ರ ಪೂರೈಕೆಯಾಗುತ್ತಿದೆ ಎಂದು ವರದಿ ಹೇಳಿದೆ. ಇದರಿಂದಾಗಿ ಚಿಲ್ಲರೆ ಅಂಗಡಿಗಳಲ್ಲಿ ತರಕಾರಿ ಬೆಲೆ ದುಪ್ಪಟ್ಟಾಗಿದೆ ಎಂದು ವರದಿ ತಿಳಿಸಿದೆ.
short by Lloyd Dias / 05:22 pm on 04 May
ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ವಿಶೇಷ ತನಿಖಾ ತಂಡವು (ಎಸ್ಐಟಿ) ಅವರನ್ನು ಶನಿವಾರ ಬೆಂಗಳೂರಿನಲ್ಲಿ ಬಂಧಿಸಿದೆ. ಅವರು ಲೈಂಗಿಕ ಹಗರಣದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದ ಮೊದಲ ಆರೋಪಿಯಾಗಿದ್ದಾರೆ. ಎಸ್ಐಟಿ ಎಸ್‌ಪಿ ಸಿ.ಎ.ಸೈಮನ್ ನೇತೃತ್ವದ ತಂಡವು ಬೆಂಗಳೂರಿನ ದೇವೇಗೌಡರ ನಿವಾಸದಲ್ಲಿದ್ದ ರೇವಣ್ಣರನ್ನು ವಶಕ್ಕೆ ಪಡೆದಿದೆ. ಎಸ್ಐಟಿ ರೇವಣ್ಣ ವಿರುದ್ಧ ಲುಕ್‌ಔಟ್ ನೊಟಿಸ್ ಜಾರಿಗೊಳಿಸಿತ್ತು.
short by Lloyd Dias / 07:18 pm on 04 May
ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡಬೇಲಾಳು ಗ್ರಾ.ಪಂ.ಯ ಪಿಡಿಒ ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯದ ಅವಧಿ ಮುಗಿಯುವ ಮುನ್ನವೇ ಕಚೇರಿಯಿಂದ ತೆರಳಿದ್ದಾರೆ ಎಂದು ಗ್ರಾ.ಪಂ. ಸದಸ್ಯ ಕುಮಾರ್ ಅವರು ಹೇಳಿದ್ದಾರೆ. ಈ ಕುರಿತಾಗಿ ವಿಡಿಯೋ ಹರಿಬಿಟ್ಟಿರುವ ಅವರು, ಸಂಜೆ 4 ಗಂಟೆ ವೇಳೆಗೆ ಪಿಡಿಒ, ಗ್ರಾ.ಪಂ. ಕಾರ್ಯದರ್ಶಿ ಸೇರಿದಂತೆ ಗ್ರೂಪ್ ‘ಡಿ’ ನೌಕರರ ಹೊರತಾಗಿ ಎಲ್ಲರೂ ಮನೆಗೆ ಹೋಗಿದ್ದರು ಎಂದು ತಿಳಿಸಿದರು.
short by Lloyd Dias / 10:35 pm on 04 May
ಲೈಂಗಿಕ ದೌರ್ಜನ್ಯದ ಆರೋಪ ಹೊತ್ತು ಜೆಡಿಎಸ್‌ನಿಂದ ಅಮಾನತುಗೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮಾಹಿತಿ ನೀಡಿದೆ. ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಪ್ರಜ್ವಲ್ ಜರ್ಮನಿಗೆ ಪರಾರಿಯಾಗಿದ್ದಾರೆ. ಇಂಟರ್‌ಪೋಲ್ ಪ್ರಕಾರ, ಬ್ಲೂ ಕಾರ್ನರ್ ನೋಟಿಸ್ ದೇಶವು "ಜಾಗೃತಗೊಳ್ಳಲು ಮತ್ತು ಮಾಹಿತಿ ಹಂಚಿಕೊಳ್ಳಲು" ಅನುವು ಮಾಡುತ್ತದೆ.
short by Koushik KS / 04:53 pm on 04 May
ಮೈಸೂರಿನಲ್ಲಿ ಶುಕ್ರವಾರ ಸುರಿದ ಗಾಳಿ-ಮಳೆಗೆ ಮರ ಉರುಳಿಬಿದ್ದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಾಯವಾಗಿದೆ. ನಗರದ ಲಲಿತ್‌ಮಹಲ್ ಹೆಲಿಪ್ಯಾಡ್ ಬಳಿ ಸಹನಾ ಎಂಬುವವರ ಮೇಲೆ ಮರ ಬಿದ್ದಿದ್ದು, ಕಾರಂಜಿ ಕೆರೆಯ ಬಳಿ ಅಮೀರ್ ಇರ್ಫಾನ್ ಮತ್ತು ಶಂಸುದ್ದೀನ್ ಎಂಬುವವರ ದ್ವಿಚಕ್ರ ವಾಹನದ ಮೇಲೆ ಮರ ಉರುಳಿದೆ. ಗಾಯಾಳುಗಳನ್ನು ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಕ್ಕೆ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
short by Lloyd Dias / 02:22 pm on 04 May
ಬಿರುಗಾಳಿ ಸಹಿತ ಸುರಿದ ಮಳೆಗೆ ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಶಿವಶಂಕರ್ ಎಂಬುವವರಿಗೆ ಸೇರಿದ ಬಾಳೆ ಹಾಗೂ ಹೀರೆಕಾಯಿ ಬೆಳೆ ನಾಶವಾಗಿದೆ. ಒಂದು ಎಕರೆಯಲ್ಲಿ ಬೆಳೆದಿದ್ದ ಬಾಳೆ ಹಾಗೂ ಇನ್ನೊಂದು ಎಕರೆಯಲ್ಲಿ ಬೆಳೆದಿದ್ದ ಹೀರೆಕಾಯಿ ಸಂಪೂರ್ಣ ನೆಲಕಚ್ಚಿದೆ. “ಶುಕ್ರವಾರ ಸಂಜೆ ಸುರಿದ ಮಳೆಯಿಂದ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು” ಎಂದು ಶಿವಶಂಕರ್ ಕೇಳಿಕೊಂಡಿದ್ದಾರೆ.
short by Koushik KS / 03:22 pm on 04 May
ವೇಶ್ಯಾವಾಟಿಕೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ 2023ರ ಜನವರಿಯಿಂದ ಜೈಲಿನಲ್ಲಿದ್ದ ಸ್ಯಾಂಟ್ರೊ ರವಿಗೆ ಮೈಸೂರಿನ 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅನಾರೋಗ್ಯದ ಕಾರಣಕ್ಕಾಗಿ ಸ್ಯಾಂಟ್ರೊ ರವಿಗೆ ಜಾಮೀನು ಮಂಜೂರು ಮಾಡಬೇಕೆಂದು ವಕೀಲ ರವೀಂದ್ರ ಕಾಮತ್ ಅವರು ವಾದ ಮಂಡಿಸಿದ್ದರು. ಜಾಮೀನು ಮಂಜೂರಾತಿಯನ್ನು ಪ್ರಶ್ನಿಸಿ ಒಡನಾಡಿ ಸಂಸ್ಥೆ ಸುಪ್ರೀಂಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದೆ.
short by Lloyd Dias / 03:45 pm on 04 May
ಮಂತ್ರಾಲಯದಲ್ಲಿ ಮೇ 8ರಂದು ರಾಘವೇಂದ್ರ ಸ್ವಾಮಿಗಳ 20 ಸಾವಿರ ಚದರ ಅಡಿ ವಿಸ್ತೀರ್ಣದ ಚಿತ್ರವನ್ನು ರಂಗೋಲಿ ಬಳಸಿ ನಿರ್ಮಿಸಲಾಗುವುದು ಎಂದು ಕಲಾವಿದ ಪುನೀತ್ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ತಂಡದಲ್ಲಿ 9 ಜನ ಸದಸ್ಯರಿದ್ದು, ಕೇವಲ 12 ಗಂಟೆಯಲ್ಲಿ ರಂಗೋಲಿ ಬಿಡಿಸಿ ವಿಶ್ವ ಹಾಗೂ ದೇಶೀಯ ದಾಖಲೆ ನಿರ್ಮಿಸಲು ಮುಂದಾಗಿದ್ದೇವೆ ಎಂದರು. ಇದಕ್ಕಾಗಿ ಸುಮಾರು 800 ಕೆ.ಜಿ ರಂಗೋಲಿ ಅಗತ್ಯವಿದೆ ಎಂದು ಅವರು ತಿಳಿಸಿದರು.
short by Lloyd Dias / 08:24 pm on 04 May
“ಏರ್‌ಪೋರ್ಟ್ ಮತ್ತು ವಿಮಾನದ ಒಳಗಡೆ ಸ್ಫೋಟಕ ಇರಿಸಲಾಗಿದೆ. ಅವುಗಳನ್ನು ಸ್ಫೋಟಿಸಿ ಜೀವಹಾನಿ ಮಾಡುತ್ತೇವೆ” ಎಂದು ಏಪ್ರಿಲ್ 29ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇ-ಮೇಲ್‌ಗೆ ಅಪರಿಚಿತ ವ್ಯಕ್ತಿ ಬೆದರಿಕೆ ಸಂದೇಶ ಕಳುಹಿಸಿದ್ದು, ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. “ಅಪರಿಚಿತನು ದೇಶದ 25ಕ್ಕೂ ಹೆಚ್ಚು ಏರ್‌ಪೋರ್ಟ್‌ಗಳಿಗೆ ಬೆದರಿಕೆ ಮೇಲ್ ಕಳುಹಿಸಿದ್ದಾನೆ” ಎಂದು ಪೊಲೀಸ್ ಕಮಿಷನ‌ರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
short by Koushik KS / 04:28 pm on 04 May
ಕೆ.ಆರ್.ನಗರದಿಂದ ಅಪಹರಣಕ್ಕೊಳಗಾದ ಸಂತ್ರಸ್ತೆಯನ್ನು ಹೆಚ್.ಡಿ.ರೇವಣ್ಣ ಅವರ ಆಪ್ತಸಹಾಯಕ ಹುಣಸೂರಿನ ರಾಜಶೇಖರ್ ಅವರ ಮನೆಯಿಂದ ಅಧಿಕಾರಿಗಳು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ. ಬಂಧಿತ ಸತೀಶ್ ಬಾಬು ಮಹಿಳೆಯನ್ನು ಕರೆದೊಯ್ದಿದ್ದು, ಏಪ್ರಿಲ್ 29ರಿಂದ ಆಕೆಯನ್ನು ಕಾಳೇನಹಳ್ಳಿಯ ತೋಟದ ಮನೆಯಲ್ಲಿ ಇರಿಸಲಾಗಿತ್ತು ಎಂದು ವರದಿ ಹೇಳಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಸಂತ್ರಸ್ತೆಯನ್ನು ಬೆಂಗಳೂರಿಗೆ ಕರೆತರಲಾಗುವುದು ಎಂದು ವರದಿ ತಿಳಿಸಿದೆ.
short by Lloyd Dias / 05:53 pm on 04 May
ಹೆಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಶನಿವಾರ ಧಾರಾಕಾರ ಮಳೆ ಸುರಿದ ಪರಿಣಾಮ ಅತಿಯಾದ ಬಿಸಿಲಿನಿಂದ ಉಂಟಾಗುವ ಕಾಡ್ಗಿಚ್ಚಿನ ಆತಂಕ ದೂರವಾಗಿದೆ ಎಂದು ವರದಿಯಾಗಿದೆ. ನಾಗರಹೊಳೆ ಅಭಯಾರಣ್ಯದಲ್ಲಿ ಮಳೆಯ ಕೊರತೆಯಿಂದ ಸೋಲಾರ್ ಪಂಪ್‌ಸೆಟ್‌ಗಳ ಮೂಲಕ ಕೆರೆಗಳನ್ನು ತುಂಬಿ ವನ್ಯಜೀವಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು ಎಂದು ಡಿಸಿಎಫ್ ಹರ್ಷಕುಮಾರ್ ಈ ಹಿಂದೆ ತಿಳಿಸಿದ್ದರು.
short by Lloyd Dias / 06:54 pm on 04 May
ಸುಮಾರು ಒಂದು ವರ್ಷದಿಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ವಿರುದ್ಧದ ಸಾಕ್ಷ್ಯಾಧಾರಗಳನ್ನು ನಿರ್ಲಕ್ಷಿಸಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ. "ಒಕ್ಕಲಿಗ ಮತಗಳು ಕಾಂಗ್ರೆಸ್ ಕೈಯಿಂದ ಹೋಗಬಹುದು ಎಂದು ಭಾವಿಸಿ ಲೋಕಸಭೆಯ ಮೊದಲ ಹಂತ ಮುಗಿಯುವವರೆಗೆ ಮೌನವಾಗಿರಲು ನಿರ್ಧರಿಸಿತ್ತು" ಎಂದು ಅವರು ಹೇಳಿದರು.
short by Lloyd Dias / 09:29 pm on 04 May
ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿದ್ದು, ಮೇ 9ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಮೈಸೂರಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಹೇಳಿದರು. “ಮೇ 16ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಮೇ 17ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 3ರಂದು ಮತದಾನ ಹಾಗೂ ಜೂನ್ 6ರಂದು ಮತ ಎಣಿಕೆ ನಡೆಯಲಿದೆ” ಎಂದು ಅವರು ತಿಳಿಸಿದರು.
short by Lloyd Dias / 07:50 pm on 04 May
ಸಂಸದ ಪ್ರಜ್ವಲ್​​ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​​​ ನಾಯಕ ರಾಹುಲ್​​ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಸಂತ್ರಸ್ತರಿಗೆ ರಕ್ಷಣೆ ನೀಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದಿರುವ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರಿಗೆ ಮಾಹಿತಿ ಇದ್ದರೂ ಪ್ರಜ್ವಲ್‌ಗೆ ಟಿಕೆಟ್​​​ ನೀಡಿರುವುದು ಆಘಾತದ ವಿಷಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
short by Koushik KS / 12:55 pm on 04 May
ಜೆಡಿಎಸ್‌ನ 19 ಶಾಸಕರು ಕಾಂಗ್ರೆಸ್‌ನ ಯಾವ ಆಮಿಷಕ್ಕೂ ಒಳಗಾಗುವುದಿಲ್ಲ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, “ಜೆಡಿಎಸ್‌ನ 19 ಶಾಸಕರು ಕಾಂಗ್ರೆಸ್‌ನ ಬಿರುಗಾಳಿ ಎದುರು ಗೆದ್ದು ಬಂದಂತವರು. ಈಗ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅಸಮಾಧಾನ ಭಿನ್ನಮತ ಉಂಟಾಗಿದೆ ಎಂಬುದು ಸುಳ್ಳು ಸುದ್ದಿ” ಎಂದರು. ಪ್ರಜ್ವಲ್ ಅವರನ್ನು ನಾವು ಅಮಾನತು ಮಾಡಿದ್ದೇವೆ, ಪ್ರಕರಣ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
short by Koushik KS / 01:22 pm on 04 May
ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಚಿತ್ರೀಕರಿಸಿದ ಆರೋಪದ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎರಡನೇ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಶನಿವಾರ ಹೇಳಿದ್ದಾರೆ. ಪ್ರಜ್ವಲ್ ತಂದೆ ಹೆಚ್.ಡಿ.ರೇವಣ್ಣ ವಿರುದ್ಧವೂ ಲುಕ್‌ಔಟ್ ನೋಟಿಸ್ ಜಾರಿಯಾಗಿದೆ. “ನೋಟಿಸ್‌ಗೆ ಅವರು ಪ್ರತಿಕ್ರಿಯಿಸದಿದ್ದರೆ, ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಐಟಿ ನಿರ್ಧರಿಸಲಿದೆ” ಎಂದು ಪರಮೇಶ್ವರ್ ತಿಳಿಸಿದ್ದಾರೆ.
short by Koushik KS / 01:46 pm on 04 May
ಲೈಂಗಿಕ ದೌರ್ಜನ್ಯದ ಆರೋಪದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವು (ಎಸ್‌ಐಟಿ) ಹಾಸನದಲ್ಲಿರುವ ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಮನೆಗೆ ಆಗಮಿಸಿದೆ. ಗೃಹ ಸಚಿವ ಜಿ.ಪರಮೇಶ್ವರ ಅವರು ಶನಿವಾರದಂದು ಪ್ರಜ್ವಲ್ ವಿರುದ್ಧ ಎರಡನೇ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಹೇಳಿದ ನಂತರ ಈ ಘಟನೆ ನಡೆದಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ.
short by Lloyd Dias / 02:46 pm on 04 May
J&Kಯ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಬೆಂಗಾವಲು ಪಡೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ANI ವರದಿ ಮಾಡಿದೆ. ದಾಳಿಯಲ್ಲಿ ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. "ಸ್ಥಳೀಯ ರಾಷ್ಟ್ರೀಯ ರೈಫಲ್ಸ್ ಘಟಕವು ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ವಾಹನಗಳನ್ನು ವಾಯು ನೆಲೆಯೊಳಗೆ ಭದ್ರಪಡಿಸಲಾಗಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
short by Lloyd Dias / 08:12 pm on 04 May
Load More
For the best experience use inshorts app on your smartphone