For the best experience use Mini app app on your smartphone
ಮತದಾನ ಮಾಡಿದ ನಂತರ ವ್ಯಕ್ತಿಯೊಬ್ಬರು ತೊರೆಗೆ ಬಿದ್ದು ಮೃತಪಟ್ಟ ಘಟನೆ ಸಾಲಿಗ್ರಾಮ ತಾಲ್ಲೂಕಿನ ಕುಪ್ಪೆ ಗ್ರಾಮದಲ್ಲಿ ನಡೆದಿದೆ. 55 ವರ್ಷದ ನಾಗರಾಜು ಬೆಳಗ್ಗೆ 9 ಗಂಟೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ್ದರು. ಆ ನಂತರ ಹೊಸೂರು ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ತೊರೆಯ ಬಳಿ ಇರುವ ಕಿರು ಸೇತುವೆಯ ಮೇಲೆ ಕುಳಿತಿದ್ದಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.
short by Koushik KS / 07:55 am on 27 Apr
ಕಾರು ಮರಕ್ಕೆ ಡಿಕ್ಕಿಯಾದ ಪರಿಣಾಮ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಬಣ್ಣಾರಿ ಅಮ್ಮನ್ ಶುಗರ್ ಪ್ಯಾಕ್ಟರಿ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಗಾಯಾಳು ಜ್ಞಾನೇಶ್, ಪ್ರಕಾಶ್ ಗೋಪಿನಾಥ್ ಎಂಬುವವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ನೌಕರರು ಎಂದು ವರದಿಯಾಗಿದ್ದು, ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಪ್ರಾಣಹಾನಿ ತಪ್ಪಿದೆ.
short by Koushik KS / 01:11 pm on 27 Apr
ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕನ್ನಡಿಗರು ಇದ್ದರೂ ಕೇಂದ್ರ ಸರ್ಕಾರ ನೀಡುವ ನಾಗರಿಕ ಪ್ರಶಸ್ತಿಗಳಿಗೆ ಅಂತಹವರನ್ನು ಶಿಫಾರಸು ಮಾಡದೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು. ಮೈಸೂರಿನಲ್ಲಿ ನಡೆದ ಡಾ. ರಾಜ್‌ಕುಮಾರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿಗರಾದ ಭೀಮಸೇನ ಜೋಷಿಯವರಿಗೆ ಮಹಾರಾಷ್ಟ್ರ ಸರ್ಕಾರದ ಶಿಫಾರಸಿನ ಮೇಲೆ ಭಾರತ ರತ್ನ ನೀಡಲಾಗಿತ್ತು ಎಂದರು.
short by Lloyd Dias / 04:56 pm on 27 Apr
ಲಂಡನ್‌ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಚೇತನಾ ಮಾಲಂಗಿ ಎಂಬ ಯುವತಿ ಲೋಕಸಭಾ ಚುನಾವಣೆಗಾಗಿ ಮೈಸೂರಿಗೆ ಆಗಮಿಸಿ ಶುಕ್ರವಾರ ಮತದಾನ ಮಾಡಿದ್ದಾರೆ. ಚೇತನಾ ಅವರು ತಮ್ಮ ತಾಯಿ ಮಂಜುಳಾ ಸುರೇಶ್ ಅವರೊಂದಿಗೆ ನರಸಿಂಹರಾಜ ಕ್ಷೇತ್ರದ ಜೆಎಸ್ಎಸ್ ಶಾಲೆಯಲ್ಲಿ ಮತದಾನ ಮಾಡಿದರು. “ಮತದಾನ ಮಾಡಿರುವುದು ಸಂತಸ ತಂದಿದೆ. ಮತದಾನದ ಮೂಲಕ ನಮ್ಮ ಹಕ್ಕು ಚಲಾಯಿಸಬೇಕು” ಎಂದು ಅವರು ಹೇಳಿದರು.
short by Lloyd Dias / 05:54 pm on 27 Apr
2015-16ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಎಲ್ಲಾ 15 ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರು ನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಸಾಕ್ಷ್ಯಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ವಿಚಾರಣೆ ಹಂತದಲ್ಲೇ ಓಬಳರಾಜು, ರುದ್ರಪ್ಪ, ರಂಗನಾಥ್‌ ವಿರುದ್ಧದ ಆರೋಪಗಳನ್ನು ಕೈ ಬಿಡಲಾಗಿತ್ತು. ಎರಡನೇ ಆರೋಪಿ ಶಿವಕುಮಾರಯ್ಯ ವಿಚಾರಣಾ ವೇಳೆ ಸಾವನ್ನಪ್ಪಿದ್ದರು.
short by Koushik KS / 08:59 am on 27 Apr
ಮಳೆ ಕೊರತೆ, ಬರಗಾಲ, ಬೇಸಿಗೆಯಿಂದಾಗಿ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟವು ಅವುಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ.25ಕ್ಕಿಂತ ಕಡಿಮೆಯಾಗಿದೆ ಎಂದು ವರದಿಯಾಗಿದೆ. ರಾಜ್ಯದ 14 ಜಲಾಶಯಗಳ ಸಂಗ್ರಹ ಸಾಮರ್ಥ್ಯ 895.62 tmcft ಇದ್ದು, ಈಗ ಅವುಗಳಲ್ಲಿ 217.75 tmcft ನೀರು ಮಾತ್ರ ಇವೆ ಎಂದು ವರದಿ ಹೇಳಿದೆ. ಕಳೆದ ವರ್ಷ ಈ ಅವಧಿಯಲ್ಲಿ 269 ಟಿಎಂಸಿ ಅಡಿ ನೀರು ಇತ್ತು. ಆವಿಯಾಗುವಿಕೆಯಿಂದ ತಿಂಗಳಿಗೆ 150 ಮಿ.ಮೀ ನೀರು ನಷ್ಟವಾಗುತ್ತದೆ ಎಂದು ವರದಿ ತಿಳಿಸಿದೆ.
short by Koushik KS / 09:34 am on 27 Apr
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಘೋಷಣೆ ಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ರಾಜ್ಯ ಸರ್ಕಾರ ₹18,174 ಕೋಟಿ ಬರ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಪರಿಹಾರ ಬಿಡುಗಡೆ ವಿಳಂಬವಾದ ಹಿನ್ನೆಲೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಬಳಿಕ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಸುಪ್ರೀಂ ಕೋರ್ಟ್​ನಲ್ಲಿ ತಿಳಿಸಿತ್ತು.
short by Koushik KS / 11:27 am on 27 Apr
ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಚುನಾವಣಾ ಸ್ಟ್ರಾಂಗ್ ರೂಂಗೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರೊಂದಿಗೆ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಟ್ರಾಂಗ್ ರೂಂಗಳಿಗೆ ಮೂರು ಹಂತದ ಭದ್ರತೆ ಒದಗಿಸಿದ್ದು, ಇವಿಎಂ ಮತ್ತು ವಿವಿಪ್ಯಾಟ್ ಇರುವ ಕೊಠಡಿ ಹೊರಗಡೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
short by Lloyd Dias / 05:10 pm on 27 Apr
ಮತ ಚಲಾಯಿಸಿ ಮನೆಗೆ ತೆರಳುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪಾದಚಾರಿ ಮತ್ತು ಬೈಕ್ ಸವಾರ ಇಬ್ಬರೂ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ತಾಂಡವಪುರ ಗ್ರಾಮದಲ್ಲಿ ನಡೆದಿದೆ. ಬೈಕ್ ಸವಾರ ತನ್ನ ಸ್ನೇಹಿತನೊಂದಿಗೆ ಚಾಮರಾಜನಗರ ತಾಲ್ಲೂಕಿನ ಗಾಳಿಪುರ ಗ್ರಾಮದಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಹಿಂಬದಿ ಸವಾರ ಅನಿಲ್ ಪಟೇಲ್‌ಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ನಂಜನಗೂಡು ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.
short by Koushik KS / 09:58 am on 27 Apr
ಸರಗಳ್ಳತನ ಮಾಡುತ್ತಿದ್ದ ಕಳ್ಳನನ್ನು ಮೈಸೂರಿನ ಕುವೆಂಪುನಗರ ಪೊಲೀಸರು ಬಂಧಿಸಿ, ₹3.3 ಲಕ್ಷ ಮೌಲ್ಯದ 55 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದಾರೆ. ಶ್ರೀರಾಂಪುರ ಎರಡನೇ ಹಂತದ ಮಧುವನ ಉದ್ಯಾನದಲ್ಲಿ ಏ.23ರಂದು ಬೆಳಗ್ಗೆ ವಾಯುವಿಹಾರ ಮಾಡುತ್ತಿದ್ದ ಮಹಿಳೆಯ ಸರ ಕಿತ್ತುಕೊಂಡು ಆರೋಪಿ ಪರಾರಿಯಾಗಿದ್ದನು. ಅದೇ ದಿನ ಸಂಜೆ ದೇವಯ್ಯನಹುಂಡಿ ಬಳಿಯ ಕಲ್ಯಾಣಮಂಟಪದಲ್ಲಿ ಆತ ಜಗಳ ಮಾಡುತ್ತಿದ್ದಾಗ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
short by Koushik KS / 08:15 am on 27 Apr
ಹುಣಸೂರು ತಾಲ್ಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ತಾವು ಮೇಯಿಸುತ್ತಿದ್ದ ಮೇಕೆಯನ್ನು ಮತಗಟ್ಟೆಯ ಹೊರಗಿದ್ದ ಕಂಬಕ್ಕೆ ಕಟ್ಟಿಹಾಕಿ ಮತ ಚಲಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಲೋಕಸಭಾ ಚುನಾವಣೆಗೆ ಏಳನೇ ಬಾರಿ ಮತ ಚಲಾಯಿಸುತ್ತಿದ್ದೇನೆ ಎಂದು ಮಹಿಳೆ ಹೇಳಿರುವುದಾಗಿ ‘X’ ಬಳಕೆದಾರರೊಬ್ಬರು ಹೇಳಿದ್ದಾರೆ.
short by Lloyd Dias / 09:48 pm on 26 Apr
ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮೊದಲ ಹಂತದ ಮತದಾನ ನಡೆದಿದ್ದು, “ಮೈಸೂರಿನಲ್ಲಿ ಮತಯಂತ್ರಗಳಿಗೆ 3 ಹಂತದ ಭದ್ರತೆ ವಹಿಸಲಾಗಿದ್ದು ಪ್ರತಿ ಶಿಫ್ಟ್‌ನಲ್ಲಿ 60 ಸಿಬ್ಬಂದಿಯಿಂದ ಬಂದೋಬಸ್ತ್ ಮಾಡಲಾಗುತ್ತಿದೆ” ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ ರಾಜೇಂದ್ರ ತಿಳಿಸಿದ್ದಾರೆ. ಕೇಂದ್ರ ಪ್ಯಾರಾ ಮಿಲಿಟರಿ ಫೋರ್ಸ್ ಹಾಗೂ ಸ್ಟೇಟ್ ಆರ್ಮ್ಡ್ ಪೊಲೀಸರ ಭದ್ರತೆ ನೀಡಲಾಗಿದೆ. ಚಟುವಟಿಕೆಗಳ ಮೇಲೆ ನಿಗಾ ವಹಿಸಲು 150ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
short by Koushik KS / 12:50 pm on 27 Apr
ಪಂಜಾಬ್ ಕಿಂಗ್ಸ್ ಶುಕ್ರವಾರ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ರನ್ ಚೇಸ್ ದಾಖಲಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಕೆಕೆಆರ್ ವಿರುದ್ಧ 18.4 ಓವರ್ ಗಳಲ್ಲಿ 262 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಈ ದಾಖಲೆ ನಿರ್ಮಿಸಿದೆ. 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 259 ರನ್‌ಗಳ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾದ ಹೆಸರಲ್ಲಿ ಈ ಹಿಂದಿನ ಅತ್ಯಂತ ಯಶಸ್ವಿ ಟಿ20 ರನ್ ಚೇಸ್ ಇತ್ತು.
short by Koushik KS / 07:11 am on 27 Apr
ಲೋಕಸಭಾ ಚುನಾವಣೆಗೆ ಶುಕ್ರವಾರ ನಡೆದ ಮತದಾನ ವೇಳೆ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂ ಹಾನಿಗೊಳಗಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ (ಏ.29) ಮರು ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿ 528 ಮತದಾರರಿದ್ದು, ಶುಕ್ರವಾರ 9 ಮಂದಿ ಮತದಾನ ಮಾಡಿದ್ದರು. ಮತದಾನ ಬಹಿಷ್ಕಾರದ ವಿಚಾರದಲ್ಲಿ ಗಲಾಟೆ ನಡೆದಿತ್ತು. ಗಲಾಟೆ ಪ್ರಕರಣದಲ್ಲಿ 25 ಜನರನ್ನು ಬಂಧಿಸಲಾಗಿದೆ.
short by Koushik KS / 05:09 pm on 27 Apr
“ಪ್ರತಾಪ್ ಸಿಂಹ ಅವರು 20 ದಿನಗಳಿಂದ ಕಾಣುತ್ತಿಲ್ಲ ನಾಪತ್ತೆಯಾಗಿದ್ದಾರೆ, ನಾನು ಲೋಕಸಭೆ ಚುನಾವಣೆ ಗೆದ್ದ ಬಳಿಕ ಅವರನ್ನು ಭೇಟಿಯಾಗಿ ಹಾರ ಹಾಕುತ್ತೇನೆ” ಎಂದು ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಹೇಳಿದರು. “21 ಲಕ್ಷ ಮತದಾರರ ಪೈಕಿ 16 ಲಕ್ಷ ಮತದಾರರ ಮತದಾನ ಮಾಡಿದ್ದು, ಮೈಸೂರು-ಕೊಡಗು ಮತದಾರರಿಗೆ ಅಭಿನಂದನೆ ಹೇಳುತ್ತೇನೆ. ರಾಜ್ಯದಲ್ಲಿ ಕನಿಷ್ಠ 22 ಸ್ಥಾನ ಗೆಲ್ಲಲೇಬೇಕು. ನಮ್ಮ ನಾಯಕರ ಮಾತಿಗೆ ನಾನು ಬದ್ಧನಾಗಿರುತ್ತೇನೆ” ಎಂದರು.
short by Koushik KS / 05:32 pm on 27 Apr
ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಒಳಪಡುವ ಹೆಚ್.ಡಿ.ಕೋಟೆ ತಾಲ್ಲೂಕಿನ ಹಲವು ಮತಗಟ್ಟೆಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿದರು. ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿಯಾದ ಶಾಸಕರು ಮತದಾನ ಪ್ರಮಾಣ ಮತ್ತು ಇತರೆ ವಿಚಾರಗಳ ಕುರಿತು ಮಾಹಿತಿ ಪಡೆದರು. ಇದಕ್ಕೂ ಮುನ್ನ ಅನಿಲ್ ಚಿಕ್ಕಮಾದು ಅವರು ತಮ್ಮ ಸ್ವಗ್ರಾಮವಾದ ಹೊಸರಾಮನಹಳ್ಳಿಯಲ್ಲಿ ಮತದಾನ ಮಾಡಿದ್ದರು.
short by Lloyd Dias / 10:09 pm on 26 Apr
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್​ಟಿಯನ್ನು ಬದಲಾಯಿಸಿ ಸರಳ ಜಿಎಸ್​ಟಿಯನ್ನು ಜಾರಿ ಮಾಡುತ್ತೇವೆ. ಇದರಿಂದ ರೈತರು, ಬಡವರು ಮತ್ತು ಕಾರ್ಮಿಕರಿಗೆ ನೆರವಾಗುತ್ತೇವೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ. ಬಳ್ಳಾರಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, “ಅಗ್ನಿವೀರ ಯೋಜನೆ ರದ್ದು ಮಾಡುತ್ತೇವೆ. ಬಿಜೆಪಿ ಭಾರತೀಯ ಚೊಂಬು ಪಾರ್ಟಿ, ಪ್ರಧಾನಿ ನರೇಂದ್ರ ಮೋದಿ ನಿಮಗೆ ಖಾಲಿ ಚೊಂಬು ನೀಡಿದ್ದಾರೆ” ಎಂದರು.
short by Koushik KS / 07:33 am on 27 Apr
ಲೋಕಸಭೆ ಚುನಾವಣೆಗೆ ರಾಜ್ಯದ 14 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಶುಕ್ರವಾರ ಮತದಾನ ನಡೆಯಿತು. ಇದೇ ವೇಳೆ ಎಸ್​ಎಸ್​ಟಿ ಮತ್ತು ಪೊಲೀಸ್​ ಇಲಾಖೆ ರಾಜ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಹಣ, ಮದ್ಯ, ಡ್ರಗ್ಸ್, ಚಿನ್ನಾಭರಣ, ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಿದ್ದು, ಈ ಸಂಬಂಧ 2,172 ಪ್ರಕರಣಗಳು ದಾಖಲಾಗಿವೆ. ಲೈಸೆನ್ಸ್ ಉಲ್ಲಂಘನೆಯ 4,789 ಪ್ರಕರಣ, ಎನ್​ಡಿಪಿಎಸ್​ ಕಾಯ್ದೆ ಅಡಿ 177, ಸೆಕ್ಷನ್ 15ರಡಿ 28,299 ಪ್ರಕರಣಗಳು ದಾಖಲಾಗಿವೆ. 1,916 ವಾಹನಗಳನ್ನು ಜಪ್ತಿ ಮಾಡಲಾಗಿದೆ.
short by Koushik KS / 10:43 am on 27 Apr
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಶುಕ್ರವಾರ ಶೇ. 79.93ರಷ್ಟು ಮತದಾನ ದಾಖಲಾಗಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಎಲ್ಲ ಮತಗಟ್ಟೆಗಳಲ್ಲಿ ವೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು. ತಾಲ್ಲೂಕಿನ 235 ಮತಗಟ್ಟೆಗಳ ಪೈಕಿ ಮೂರರ VVPATನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಯಂತ್ರವನ್ನು ಬದಲಿಸಲಾಯಿತು. ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
short by Lloyd Dias / 02:59 pm on 27 Apr
ಕೇಂದ್ರ ಸರ್ಕಾರ ₹3,454 ಕೋಟಿ ಬರ ಪರಿಹಾರ ಬಿಡುಗಡೆಗೊಳಿಸಿದ ಕುರಿತು ಮೈಸೂರಲ್ಲಿ ಪ್ರತಿಕ್ರಿಯಿಸಿದ ರಾಜ್ಯ ರೈತ ಸಂಘಟನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ನಾವು ಕೇಳಿದ್ದು 18 ಸಾವಿರ ಕೋಟಿ, ಆದರೆ ಈಗ ಭಿಕ್ಷೆ ರೂಪದಲ್ಲಿ ಪರಿಹಾರ ನೀಡಲಾಗಿದೆ ಎಂದಿದ್ದಾರೆ. “NDRF ಮಾನದಂಡದ ಅಡಿಯಲ್ಲಿ ಪರಿಹಾರ ಕೇಳಲಾಗಿತ್ತು. ಕಡಿಮೆ ಪರಿಹಾರ ನೀಡಿರುವುದರಿಂದ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ನ್ಯಾಯಾಂಗ ಹೋರಾಟ ಮುಂದುವರಿಸಬೇಕು” ಎಂದರು.
short by Koushik KS / 04:20 pm on 27 Apr
ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್‌ಗೆ ಶ್ರೀರಕ್ಷೆಯಾಗಲಿವೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಹೇಳಿದರು. ಪಿರಿಯಾಪಟ್ಟಣದ ಕಿತ್ತೂರು ಗ್ರಾಮದಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲಿದ್ದು, ಬಿಜೆಪಿಯ ಜನರ ವಿರೋಧಿ ನೀತಿಗಳು ಕಾಂಗ್ರೆಸ್‌ಗೆ ಅನುಕೂಲಕರವಾಗಲಿವೆ ಎಂದರು.
short by Lloyd Dias / 11:58 pm on 26 Apr
ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ನಂಜನಗೂಡು ತಾಲ್ಲೂಕಿನಲ್ಲಿ ಶುಕ್ರವಾರ ಶೇ.68.5ರಷ್ಟು ಮತದಾನ ನಡೆದಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನಡೆದ ಮತದಾನದಲ್ಲಿ ಅಹಿತಕರ ಘಟನೆ ವರದಿಯಾಗಿಲ್ಲ. ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಹೆಗ್ಗವಾಡಿ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದ್ದು, ಕಳಲೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮತದಾನ ಮಾಡಿದರು. ಚಾಮರಾಜನಗರ ಕ್ಷೇತ್ರದಲ್ಲಿ ಸುನೀಲ್ ಬೋಸ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ.
short by Koushik KS / 03:11 pm on 27 Apr
₹18,172 ಕೋಟಿ ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಗೆ ಶನಿವಾರ ಕೇಂದ್ರ ಸರ್ಕಾರ ₹3,454 ಕೋಟಿ ಬಿಡುಗಡೆ ಮಾಡಿದ್ದು, “ಕೇಂದ್ರ ಸರ್ಕಾರ ಮತ್ತೊಮ್ಮೆ ಕನ್ನಡಿಗರಿಗೆ ವಂಚನೆ ಮಾಡಿದೆ” ಎಂದು ರಾಜ್ಯ ಕಾಂಗ್ರೆಸ್ ತನ್ನ ‘X’ ಖಾತೆಯಲ್ಲಿ ಪ್ರತಿಕ್ರಿಯಿಸಿದೆ. ಇದು[₹3,454 ಕೋಟಿ] ನಮಗೆ ಅಗತ್ಯವಿರುವ ಮೊತ್ತದ ಕಾಲು ಭಾಗಕ್ಕಿಂತ ಕಡಿಮೆ ಎಂದು ಬರೆದಿರುವ ಕಾಂಗ್ರೆಸ್, ನ್ಯಾಯಯುತ ಪರಿಹಾರಕ್ಕಾಗಿ ಕನ್ನಡಿಗರು ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲು ಹತ್ತಬೇಕೇ? ಎಂದು ಪ್ರಶ್ನಿಸಿದೆ.
short by Koushik KS / 02:13 pm on 27 Apr
ಮೆಲನೋಮಕ್ಕೆ ವಿಶ್ವದ ಮೊದಲ ವೈಯಕ್ತಿಕ mRNA ಕ್ಯಾನ್ಸರ್ ಲಸಿಕೆಯನ್ನು ಬ್ರಿಟಿಷ್ ರೋಗಿಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಈ ಲಸಿಕೆಯು ಕ್ಯಾನ್ಸರ್ ಕೋಶಗಳನ್ನು ಪತ್ತೆ ಹಚ್ಚಿ ರೋಗವು ಮತ್ತೆ ಬಾರದಂತೆ ತಡೆಯುತ್ತದೆ ಹಾಗೂ ಪ್ರತಿ ವ್ಯಕ್ತಿಗೂ ಪ್ರತ್ಯೇಕವಾಗಿ ಲಸಿಕೆ ತಯಾರಿಸಲಾಗುತ್ತದೆ. mRNA-4157 (V940) ಅಭಿವೃದ್ಧಿಗೆ COVID-19 ಲಸಿಕೆಗಳ ತಂತ್ರಜ್ಞಾನ ಬಳಸಲಾಗುತ್ತಿದ್ದು, ಅಂತಿಮ ಹಂತವಾದ Phase-III ಪ್ರಯೋಗ ನಡೆಯುತ್ತಿದೆ.
short by Lloyd Dias / 04:30 pm on 27 Apr
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದುರ್ಗಾಪುರದಲ್ಲಿ ಹೆಲಿಕಾಪ್ಟರ್ ಹತ್ತುವಾಗ ಸಮತೋಲನ ಕಳೆದುಕೊಂಡು ಗಾಯಗೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಸಹಾಯಕ್ಕೆ ಬರುವ ಮೊದಲು ಮಮತಾ ಬ್ಯಾನರ್ಜಿ ಹೆಲಿಕಾಪ್ಟರ್‌ನೊಳಗೆ ಮುಗ್ಗರಿಸಿ ಬೀಳುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಅವರು ಅಸನ್ಸೋಲ್‌ಗೆ ಪ್ರಯಾಣಿಸುತ್ತಿದ್ದರು.
short by Lloyd Dias / 02:38 pm on 27 Apr
Load More
For the best experience use inshorts app on your smartphone